ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗದಾತ ಕಂಪನಿಗಳು ಅಭ್ಯರ್ಥಿಗಳನ್ನು ಅಲವು ಹಂತಗಳಲ್ಲಿ ವಿವಿಧ ಕೌಶಲ್ಯಗಳನ್ನು ಪರೀಕ್ಷಿಸಿ ನೇಮಿಸಿಕೊಳ್ಳುತ್ತಾರೆ. ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಬೌದ್ಧಿಕ, ಸಾಂಗಿಕ, ಸಂವಾದ ಹಾಗೂ ತಾಂತ್ರಿಕ ಕೌಶಲ್ಯಗಳು ಉದ್ಯೋಗ ಗಿಟ್ಟಿಸುವಲ್ಲಿ ಸಹಕಾರಿಯಾಗುತ್ತವೆ.
 ಪ್ರತಿವರ್ಷವೂ ತಮ್ಮ ಇಷ್ಟದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಉತ್ತೀರ್ಣರಾದ ಲಕ್ಷಾಂತರ ಎಂಜಿನಿಯರಿಂಗ್ ಮತ್ತು ಇತರೆ ವಿದ್ಯಾರ್ಥಿಗಳು ತಮ್ಮ ಸರ್ಟಿಫಿಕೇಟ್ನೊಂದಿಗೆ ವೃತ್ತಿ ಜೀವನಕ್ಕೆ ಕಾಲಿಡಲು ಕಾತುರರಾಗಿರುತ್ತಾರೆ. ಆದರೆ ಅವರ ಅಭೀಷ್ಠೆಗೆ ತಕ್ಕಂತೆ ಉದ್ಯೋಗ ಮಾರುಕಟ್ಟೆ ಅಷ್ಟು ಉತ್ತೇಜನಕಾರಿಯಾಗಿಲ್ಲ ಎನ್ನುವುದು ಕಟು ವಾಸ್ತವ.
 ಬದಲಾಗುತ್ತಿರುವ ಈ ಸ್ಪರ್ಧಾತ್ಮಕ ತಂತ್ರಜ್ಞಾನ ಯುಗದಲ್ಲಿದಲ್ಲಿ, ಉದ್ಯೋಗ ನೀಡುವವರು ತಾವು ಆಯ್ಕೆ ಮಾಡಿಕೊಳ್ಳಬೇಕು ಎಂದು ಬಯಸುವ ಅಭ್ಯರ್ಥಿಗಳನ್ನು ತಮ್ಮದೆಯಾದ ರೀತಿಯಲ್ಲಿ ತಾವು ನೀಡಬಯಸುವ ಕೆಲಸಗಳಿಗೆ ಪೂರಕವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
 
ಆಯ್ಕೆ ಪ್ರಕ್ರಿಯೆಯ ವಿವಿಧ ಹಂತಗಳು
ಕೆಲವು ಸಮೀಕ್ಷೆಗಳ ವರದಿಯ ಪ್ರಕಾರ ಶೇಕಡ 25 ರಿಂದ 30ರಷ್ಟು ಪದವೀಧರರು ಮಾತ್ರವೇ ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಉದ್ಯೋಗವನ್ನ ಪರಿಪೂರ್ಣವಾಗಿ ನಿರ್ವಹಿಸಲು ಅರ್ಹರಾಗಿರುತ್ತಾರೆ. ಆದರೆ ಇದರಲ್ಲಿ 2-3% ಪದವೀಧರರು ಮಾತ್ರವೇ ಕಂಪನಿಗಳ ಏರ್ಪಡಿಸುವ ಸಂದರ್ಶನ ಪ್ರಕ್ರಿಯೆಯ ಮೂಲಕ ಉದ್ಯೋಗ ಪಡೆದುಕೊಳ್ಳಲು ಅರ್ಹರು ಮತ್ತು ಅದೃಷ್ಟವಂತರೂ ಆಗಿರುತ್ತಾರೆ. ಒಂದು ಸಾಮಾನ್ಯ ಗ್ರಹಿಕೆಯಿಂದ ಹೇಳುವುದಾದರೆ, ಇಷ್ಟು ಕಡಿಮೆ ಪ್ರಮಾಣದಲ್ಲಿ ಅಭ್ಯರ್ಥಿಗಳು ಉದ್ಯೋಗಕ್ಕೆ ಆಯ್ಕೆಯಾಗುವುದಕ್ಕೆ ಕಾರಣಗಳಾಗಿರುವುದು, ತಾಂತ್ರಿಕ, ಸಂವಹನ, ಮತ್ತು ಪ್ರಸ್ತುತಿ ಕೌಶಲ್ಯಗಳ ಕೊರತೆ.
 ಉದ್ಯೋಗಕ್ಕಾಗಿ ಸ್ಪರ್ಧಿಸುವ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಸೂಕ್ತವಾದವರನ್ನು ಆಯ್ಕೆ ಮಾಡಲು ಉದ್ಯೋಗದಾತರು 5 ಹಂತಗಳಲ್ಲಿ ನೇಮಕಾತಿಯ ಆಯ್ಕೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯನ್ನು ನಡೆಸುತ್ತಾರೆ.
 ನೇಮಕಾತಿ ಸಂದರ್ಭದಲ್ಲಿ ಪರಿಗಣಿಸುವ 5 ಆಯ್ಕೆ ಹಂತಗಳ ಪ್ರಕ್ರಿಯೆಯನ್ನು ಈ ಕೆಳಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
 'ರೆಸ್ಯೂಮ್' ಅಥವಾ 'ಸಿವಿ'ಯಲ್ಲಿ ನಮೂದಿಸಿರುವ ಶೈಕ್ಷಣಿಕ ಹಾಗೂ ಅಭ್ಯರ್ಥಿ ಹೊಂದಿರುವ ಇತರ ಉದ್ಯೋಗ ಪೂರಕ ವಿವರಗಳನ್ನು ಆಯ್ಕೆಯಲ್ಲಿ ಪರಿಗಣಿಸಲಾಗುತ್ತದೆ. ಉದ್ಯೋಗ ಆಧಾರಿತ ತರಬೇತಿ ಪ್ರಮಾಣ ಪತ್ರಗಳ ವಿವರ, ತಾಂತ್ರಿಕ ಜ್ಞಾನ, ಇಂಟರ್ನ್ಶಿಪ್ ( ಮಾಡಿದ್ದರೆ) ವಿವರಗಳು ಆಯ್ಕೆ ಸಮಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಎಲ್ಲದರ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗಾಗಿ ಆಯ್ಕೆ ಮಾಡಲಾಗುತ್ತದೆ.
 ಈ ಕಾರಣದಿಂದಾಗಿ ‘ಸಿವಿ' ಉತ್ತಮ ಗುಣಮಟ್ಟವನ್ನು ಹೊಂದಿರಬೇಕು. ವ್ಯಾಕರಣದ ದೋಷಗಳಿಲ್ಲದೆ ವಾಕ್ಯಗಳನ್ನು ಬಳಸಿ ಅತ್ಯಂತ ಪರಿಣಾಮಕಾರಿಯಾಗಿ ಭಾಷೆಯನ್ನು ಪ್ರಯೋಗಿಸಬೇಕು. ಹಾಗೆ ಬಳಸುವಾಗ ಅಥವಾ ಪ್ರಯೋಗಿಸುವಾಗ ಯಾವುದೇ ಕಾಗುಣಿತದ ತಪ್ಪುಗಳು ಇರದಂತೆ ಎಚ್ಚರವಹಿಸಬೇಕು. ಮುಖ್ಯ ವಿಚಾರಗಳನ್ನು ಪರಿಣಾಮಕಾರಿಯಾಗಿ ವಿಶಿಷ್ಟವಾಗಿ ಸೂಚಿಸಿರಬೇಕು. ನಾವು ಸಂದರ್ಶನ ಅಥವಾ ಉದ್ಯೋಗಕ್ಕಾಗಿ ಸಲ್ಲಿಸುವ 'ರೆಸ್ಯೂಮ್' ಅಥವಾ 'ಸಿವಿ' ಎರಡು ಪುಟಗಳಿಗಿಂತ ಹೆಚ್ಚಿರಬಾರದು.
 ಅಭ್ಯರ್ಥಿಯ ವಿಶ್ಲೇಷಣಾತ್ಮಕ (Analytical Ability) ಮತ್ತು ಪರಿಮಾಣಾತ್ಮಕ (Quantitative Ability) ಗುಣಗಳನ್ನು ಗುರುತಿಸುವ 60 ನಿಮಿಷಗಳ ಅವಧಿಯ ಒಂದು ಚಿಕ್ಕ ಲಿಖಿತ ಪರೀಕ್ಷೆಯೇ “ಅಪ್ಟಿಟ್ಯೂಡ್ ಪರೀಕ್ಷೆ”. ಈ ಪರೀಕ್ಷೆಯಲ್ಲಿ ಗಣಿತ, ತಾರ್ಕಿಕ, ಮೌಖಿಕ, ಸಾಫ್ಟ್ವೇರ್ ಪ್ರೋಗ್ರಾಮಿಂಗ್, ಜನರಲ್ ಇಂಗ್ಲೀಷ್ ವಿಷಯಗಳಿರುತ್ತವೆ. ಈ ಪರೀಕ್ಷೆ ಬಹು ಆಯ್ಕೆಯ ಉತ್ತರಗಳುಳ್ಳ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಈ ಪರೀಕ್ಷೆಯಲ್ಲಿ 45-60 ಸೆಕೆಂಡ್ಗಳಲ್ಲಿ ಪ್ರಶ್ನೆಯ ಮುಂದಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಒಂದು ಉತ್ತರವನ್ನು ಗುರುತಿಸಬೇಕು.
 ಈ ಬಗೆಯ ಪರೀಕ್ಷೆಗಳು ನಮ್ಮ ಆಲೋಚನೆಯ ವೇಗ, ಸರಿಯಾದ ಉತ್ತರವನ್ನ ಆಯ್ಕೆ ಮಾಡುವ ಜಾಣ್ಮೆ ಹಾಗೂ ನೆನಪಿನ ಶಕ್ತಿಯನ್ನು ಆಧರಿಸಿರುತ್ತವೆ. ಈ ಲಿಖಿತ ಪರೀಕ್ಷೆಯಲ್ಲಿ ಯಾವುದೇ ಉತ್ತೀರ್ಣ ಅಥವಾ ಅನುತ್ತೀರ್ಣ ಎಂದು ಇರುವುದಿಲ್ಲ. ಅಭ್ಯರ್ಥಿಗಳನ್ನು ಶ್ರೇಣಿಯ ಕ್ರಮಾಂಕz Àಆಧಾರದ ಮೇಲೆ ಸಂದರ್ಶನ ಪ್ರಕ್ರಿಯೆಯ ಮುಂದಿನ ಹಂತಕ್ಕೆ ಆಯ್ಕೆ ಮಾಡುತ್ತಾರೆ.
 ಲಿಖಿತ ಪರೀಕ್ಷೆಯ ನಂತರ ಆಯ್ಕೆ ಪ್ರಕ್ರಿಯೆಯಲ್ಲಿ ಮುಂದಿನ ಹಂತವಾಗಿ ಗುಂಪಿನಲ್ಲಿ ಸಂವಾದವನ್ನು ನಡೆಸಲಾಗುವುದು. ಇದು ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೆ ಮತ್ತು ತಿರಸ್ಕರಿಸುವುದಕ್ಕೆ ಬಹಳ ಮುಖ್ಯ ವಾದ ಮಾನದಂಡವಾಗಿರುತ್ತದೆ. ಅಂತಹ ಚಟುವಟಿಕೆಗಳನ್ನು ಅಭ್ಯರ್ಥಿಯ ಕೆಲವು ವ್ಯಕ್ತಿತ್ವ ಲಕ್ಷಣಗಳು ಮತ್ತು ಕೌಶಲ್ಯಗಳನ್ನು ಗುರುತಿಸಲು ಉದ್ಯೋಗ ನೀಡುವ ಕಂಪನಿ ಬಳಸಲಾತ್ತವೆ.ಮುಖ್ಯವಾಗಿ ಅಭ್ಯರ್ಥಿಯ ಮೌಖಿಕ ಸಂವಹನ ಕೌಶಲ್ಯ, ವರ್ತನೆ, ಅಂತರ್ ವ್ಯಕ್ತಿತ್ವ ಕೌಶಲ್ಯಗಳು, ದೇಹ ಭಾಷೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಭ್ಯರ್ಥಿ ಗುಂಪಿನಲ್ಲಿ ಹೇಗೆ ವರ್ತಿಸುತ್ತಾನೆ ಎಂಬುದನ್ನು ಪರೀಕ್ಷಿಸಲು ಬಳಸಿಕೊಳ್ಳಲಾಗುತ್ತದೆ. 15ರಿಂದ 20 ನಿಮಿಷಗಳ ಅವಧಿಯಲ್ಲಿ, 6ರಿಂದ 8 ಅಭ್ಯರ್ಥಿಗಳ ನಡುವೆ ನಡೆಯುವ ಚರ್ಚೆಯನ್ನು , ಅಭ್ಯರ್ಥಿಗಳನ್ನು ಗುರುತಿಸಲು ಮತ್ತು ಮುಖಾಮುಖಿ ಸಂದರ್ಶನಗಳಲ್ಲಿ ಆಯ್ಕೆ ಮಾಡಲು ಈ ವಿಧಾನವನ್ನ ಬಳಸಲಾಗುತ್ತದೆ.
 ಈ ಹಂತದಿಂದ ದಾಟಿ ಬರಲು ಅಭ್ಯರ್ಥಿಗೆ ನಿರಂತರವಾಗಿ ಪ್ರಸ್ತುತ ವಿದ್ಯಮಾನಗಳು, ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವಿರಬೇಕು. ಪತ್ರಿಕೆಗಳು, ನಿಯತಕಾಲಿಕೆಗಳನ್ನು ಓದುವ ಅಭ್ಯಾಸ ಮತ್ತು ದೂರದರ್ಶನದಲ್ಲಿ ಆಸಕ್ತಿದಾಯಕ ಸಾಕ್ಷ್ಯ ಚಿತ್ರಗಳನ್ನು ವೀಕ್ಷಿಸುವ ಅಭ್ಯಾಸ ಹೊಂದಿರಬೇಕು. ಈ ಅಭ್ಯಾಸ ಮತ್ತು ಹವ್ಯಾಸಗಳು ಸಾಮಾನ್ಯ ಜ್ಞಾನ ಮತ್ತು ಪ್ರಮುಖ ಸಾಮಥ್ರ್ಯಗಳನ್ನು ರೂಡಿಸಿಕೊಂಡು ಚರ್ಚಾ ಸಮೂಹಗಳಲ್ಲಿ ಅಭ್ಯರ್ಥಿಗಳಸಾಮಥ್ರ್ಯವನ್ನು ಪ್ರದರ್ಶಿಸಲು ಸಹಾಯಕವಾಗುತ್ತದೆ.
 ತಾಂತ್ರಿಕ ಸಂದರ್ಶನದಲ್ಲಿ ಸಂದರ್ಶಕರು ಅಭ್ಯರ್ಥಿಯ ಗಂಭೀರತೆ ಮಟ್ಟವನ್ನು ಖಚಿತ ಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರಿಂದಾಗಿ ಸಂದರ್ಶಕರು ವೈಯಕ್ತಿಕ ವಿಷಯಗಳನ್ನು ಮೀರಿ ಹೋಗುತ್ತಾರೆ. ತಾಂತ್ರಿಕ ಪ್ರಕ್ರಿಯೆಯ ಭಾಗದಲ್ಲಿ ಕೇಳಲಾಗುವ ಕೆಲವು ಪ್ರಶ್ನೆಗಳು ಹೀಗಿರುತ್ತವೆ.
 1. ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಥವಾ ಪದವಿಯ 4 ವರ್ಷದಲ್ಲಿ ನೀವು ಏನು ಕಲಿತ್ತಿದ್ದೀರಿ?
2. ನೀವು ಕೆಲವು ಪ್ರಮುಖ ತಂತ್ರಜ್ಞಾನ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ವಿವರಿಸಬಹುದೆ?
3. ಪ್ರಾಯೋಗಿಕ ಜಗತ್ತಿನಲ್ಲಿ ಈ ಪರಿಕಲ್ಪನೆಗಳನ್ನು ನೀವು ಹೇಗೆ ಅಳವಡಿಸಿಕೊಳ್ಳುತ್ತೀರಿ?
 ಕೆಲವು ಸಂದರ್ಶನದಲ್ಲಿ ರೇಖಾ ಚಿತ್ರಗಳನ್ನು ಬಿಡಿಸಲು ಅಥವಾ ಪ್ರಶ್ನೆಗಳನ್ನು ಪರಿಹರಿಸಲು ಕೇಳಬಹುದು. ಈ ಸುತ್ತಿನಲ್ಲಿ ಅಭ್ಯರ್ಥಿಯ ತಾಂತ್ರಿಕ ಕೌಶಲ್ಯತೆಗಳನ್ನು ಪರಿಶೀಲಿಸುವ ಮೂಲಕ, ಕಂಪನಿಗಳು ಸಾಪ್ಟ್ವೇರ್ ಇಂಜಿನಿಯರಿಂಗ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಸಂದರ್ಶನದಲ್ಲಿಅಭ್ಯರ್ಥಿಗಳ ಪ್ರಭಲವಾದ ತಾಂತ್ರಿಕ ಸಾಮಥ್ರ್ಯವನ್ನು ಗುರುತಿಸಲು ಪ್ರೋಗ್ರಾಮಿಂಗ್ ವಿಷಯಗಳಲಿ (Java, C++, Phython etc.,) ಪ್ರಶ್ನೆಗಳನ್ನು ಕೇಳಿ ಹೆಚ್ಚು ಪರಿಣಿತಿ ಹೊಂದಿದವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
 ಕೆಲವು ಸಂಸ್ಥೆಗಳು ತಮ್ಮ ಸ್ಥಾನಕ್ಕೆ ಸಂಬಂಧಿಸಿದ ತಾಂತ್ರಿಕ ಕೌಶಲ್ಯಗಳಿಗೆ ಹೆಚ್ಚುವರಿಯಾಗಿ, ಇಂಟರ್ನ್ಶಿಪ್ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡುತ್ತಾರೆ. ಸಂದರ್ಶಕರು ಅಭ್ಯರ್ಥಿಯು ತರಗತಿ ಹೊರಗೆ ಯಾವ ಯಾವ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಗಮನಿಸುತ್ತಾರೆ. 4 ವರ್ಷದ ಇಂಜಿನಿಯರಿಂಗ್ ಕಾಲೇಜಿನ ವ್ಯಾಸಾಂಗದಲ್ಲಿ ಪಡೆದ ತಾಂತ್ರಿಕ ಜ್ಞಾನದೊಂದಿಗೆ ಇಂಟರ್ನ್ಶಿಪ್ಗಳಲ್ಲಿ ಬಳಸಿದ ತಾಂತ್ರಿಕ ಕೌಶಲ್ಯಗಳನ್ನು ವಿವರವಾಗಿ ಪ್ರಸ್ತುತ ಪಡಿಸಬೇಕು.
 
ಕೌಶಲ್ಯವರ್ಧನೆ ತರಗತಿಯಲ್ಲಿ ನಿರತರಾಗಿರುವ ಉದ್ಯೋಗಾರ್ತಿಗಳು
ಇದು ಆಯ್ಕೆ ಪ್ರಕ್ರಿಯೆಯ ಅಂತಿಮ ಸುತ್ತು. ಈ ಸಂದರ್ಶನವು ಅಭ್ಯರ್ಥಿಯ ಒಟ್ಟಾರೆ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ಇಂಟರ್ನ್ಶಿಪ್ ಕೆಲಸದ ಅನುಭವ, ನಿರ್ದಿಷ್ಟ ಕ್ಷೇತ್ರದ ಕೈಗಾರಿಕೆಗಳಿಗೆ ನೀಡಿದ ಭೇಟಿ, ಇತ್ಯಾದಿ ಅನುಭವಗಳು ಆಯ್ಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ.ಮೂಲಭೂತವಾಗಿ ಇಲ್ಲಿ ಅಭ್ಯರ್ಥಿಯ ಸ್ಥಿರತೆ ಮತ್ತು ವಿಶ್ವಾಸರ್ಹ ಮಟ್ಟವನ್ನು ಮೌಲ್ಯಮಾಪನ ಮಾಡುತ್ತಾರೆ.
 ಈ ಸಂದರ್ಶನದಲ್ಲಿ ಬಹುತೇಕ ಅಭ್ಯರ್ಥಿಗಳು ತೊಂದರೆಗಳನ್ನು ಎದುರಿಸುತ್ತಾರೆ. ಏಕೆಂದರೆ ಅವರು ತಮ್ಮ ಮಹತ್ವಾಕಾಂಕ್ಷೆ ಹಾಗೂ ಈ ಉದ್ಯೋಗವನ್ನ ಆಯ್ಕೆ ಮಾಡಿಕೊಳ್ಳುತ್ತಿರುವ ಹಿನ್ನಲೆಯನ್ನು ಸ್ಪಷ್ಟವಾಗಿ ವಿವರಿಸುವಲ್ಲಿ ವಿಫಲರಾಗುತ್ತಾರೆ. ಈ ಸಂದರ್ಶನದಲ್ಲಿ ಸಾಮಾನ್ಯವಾಗಿ ಅಭ್ಯರ್ಥಿಯ ಸಂವಹನ, ಪರಸ್ಪರ ವೈಯಕ್ತಿಕ ಕೌಶಲ್ಯಗಳು, ಉತ್ಸಾಹ, ಪರಿಪಕ್ವತೆ, ನಮ್ರತೆ ಮತ್ತು ನಾಯಕತ್ವ ಗುಣಗಳನ್ನು ಪರೀಕ್ಷಿಸಲಾಗುತ್ತದೆ. ಇದಲ್ಲದೆ ಸಮಸ್ಯೆ ಬಗೆಹರಿಸುವ ಕೌಶಲ್ಯವನ್ನು ಎಚ್ಚರದಿಂದ ಗಮನಿಸಲಾಗುತ್ತದೆ. ಇವು ನಮ್ಮ ಪದವಿಯ ಅಂಕಗಳಿಗಿಂತ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ.
 ಮೇಲಿನ ನೇಮಕಾತಿ ಹಂತಗಳನ್ನು ಸಂಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು (Offer Letter) ನೀಡಲಾಗುವುದು. ಕಂಪನಿಯ ಕಾರ್ಯನಿರ್ವಾಹಕ ಪ್ರಕ್ರಿಯೆಗೆ ಸೇರುವ ಮತ್ತು ಕಂಪನಿಯ ನೀತಿಯ ಬಗ್ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ತಿಳಿಸಿಕೊಡಲಾಗುವುದು. ಆಕರ್ಷಕ ಉದ್ಯೋಗದ ಯಶಸ್ವಿ ಅಭ್ಯರ್ಥಿಯಾಗಲು ಕೌಶಲ್ಯಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಕನಸಿನ ಉದ್ಯೋಗವನ್ನು ಪಡೆಯಲು ಕೌಶಲ್ಯಗಳೇ ದಾರಿದೀಪವಾಗುತ್ತವೆ.
 ಅಭ್ಯರ್ಥಿಗಳು ತಮ್ಮ ಉದ್ಯೋಗಾನ್ವೇಷಣೆಯಲ್ಲಿ ಸಂಪೂರ್ಣ ಪರಿಣತಿಯನ್ನು ಪಡೆಯಲು ಅನೇಕ ಸಂಸ್ಥೆಗಳ ಸಹಾಯವನ್ನು ಪಡೆಯಬಹುದು. ಈ ಸಂಸ್ಥೆಗಳು ಅಭ್ಯರ್ಥಿಗಳಿಗೆ ತರಬೇತಿ ನೀಡಲು ಸರ್ವ ವಿಧದಲ್ಲಿಯೂ ಸನ್ನದ್ಧವಾಗಿರುತ್ತವೆ. ಅಲ್ಲದೆ ಈ ಸಂಸ್ಥೆಗಳು ತರಬೇತಿಯ ನಂತರ ಅಭ್ಯರ್ಥಿಗಳಿಗೆ ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಮಾರ್ಗದರ್ಶನ ನೀಡುತ್ತವೆ.